ಕಾವ್ಯನ್ಯಾಯ

ಕವಿ ಉದ್ದೇಶಿಸಿರುವ ನ್ಯಾಯ ಆತನ ಕಾವ್ಯದಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಕಾವ್ಯದ ಕಣ್ಣು ಕವಿಯ ದೃಷ್ಟಿಯಲ್ಲಿದೆ ಎಂಬ ಮಾತು ಸತ್ಯವಾದುದು. ಲೌಕಿಕ ನ್ಯಾಯಕ್ಕೂ ಕಾವ್ಯನಾಯಕ್ಕೂ ವ್ಯತ್ಯಾಸವಿದೆ. ಲೌಕಿಕವಾಗಿ ಯಾವತ್ತಿಗೂ ನ್ಯಾಯವೇ ದೊರಕುತ್ತದೆಂಬ ಭರವಸೆಯಿಲ್ಲ. ಆದರೆ ಕಾವ್ಯದಲ್ಲಿ ಹಾಗಲ್ಲ. ಕಾವ್ಯನ್ಯಾಯವೆಂಬ ಪದವನ್ನು ಒಂದೇ ಅರ್ಥದಲ್ಲಿ ತೆಗೆದುಕೊಳ್ಳುತ್ತಿದ್ದ ಶತಮಾನಗಳಿದ್ದುವು. ಬರುತ್ತ ಬರುತ್ತ ವಿಶೇಷಾರ್ಥಗಳು ಅದಕ್ಕೆ ಅಂಟತೊಡಗಿ ಈಗ ನಾಲ್ಕೈದು ವಿವಿಧ ಬಣ್ಣದ ಭಾವನೆಗಳು ಅದರ ಸುತ್ತ ಬೆಳೆದಿವೆ.

1 ಭವ್ಯಕಾವ್ಯ, ನಾಟಕ, ಅಥವಾ ಕಾದಂಬರಿಯ ಕೊನೆಯಲ್ಲಿ ಪಾತ್ರಗಳಿಗೆ ಲಭಿಸುವ ಫಲ ಕಾವ್ಯನ್ಯಾಯಕ್ಕೆ ಒಳ್ಳೆಯ ನಿದರ್ಶನ. ಒಳ್ಳೆಯವಕ್ಕೆ ಸದ್ಗತಿಯೂ ಕೆಟ್ಟವಕ್ಕೆ ದುರ್ಗತಿಯೂ ಆದಲ್ಲಿ ಅದೇ ಸರಿಯಾದ ನ್ಯಾಯ. ಏರುಪೇರುಗಳಿಂದ ಕೂಡಿ ನಡೆಯುವ ಸಜ್ಜನ, ದುರ್ಜನರಲ್ಲಿ ಹೋರಾಟವೇ ಸಾಹಿತ್ಯದ ರಸಾವಿಷ್ಟ ಕಥಾವಸ್ತು. ಹೋರಾಟದ ಅಂತ್ಯದಲ್ಲಿ ಒಂದು ಕಡೆಗೆ ಜಯ ಇನ್ನೊಂದು ಕಡೆಗೆ ಅಪಜಯ ಆಗಲೇಬೇಕು. ಶಿಷ್ಟರಿಗೆ ಜಯವೂ ದುಷ್ಟರಿಗೆ ಅಪಜಯವೂ ಒದಗಿದರೆ ಅದು ಸರಿಯಾದ ನ್ಯಾಯವಿನಿಯೋಗ. ಅದರಿಂದ ಓದುಗರಿಗೂ ಪ್ರೇಕ್ಷಕರಿಗೂ ನೆಮ್ಮದಿ. ಪ್ರಪಂಚದ ಸಾಹಿತ್ಯ ಕೃತಿಗಳಲ್ಲಿ ಅನೇಕ ಭಾಗ ಈ ಸೂತ್ರಕ್ಕೆ ಸಲ್ಲುವ ಪರಿಣಾಮವನ್ನೇ ಪ್ರಕಟಿಸುತ್ತದೆ. ಇದು ಬಹುಕಾಲ ಸಾಹಿತ್ಯ ವಿಮರ್ಶೆಯಲ್ಲಿ ಅನುಲ್ಲಂಘ್ಯ ಸೂತ್ರವಾಗಿತ್ತು. ಇದನ್ನು ಮುರಿದನೆಂಬ ಅಪವಾದಕ್ಕೆ ಪಕ್ಕಾದ ಮಹಾ ಕವಿಯೆಂದರೆ ಷೇಕ್ಸ್‍ಪಿಯರ್.

ಆಗಿನ ವಿದ್ವಾಂಸರಲ್ಲಿ ಕೆಲವರೂ 19ನೆಯ ಶತಮಾನದ ವಿದ್ವಾಂಸರಲ್ಲಿ ಅನೇಕರೂ ಆ ಸೂತ್ರಕ್ಕೆ ಒಂದು ಅನುಬಂಧವನ್ನು ತಂದು ಸೇರಿಸಿದರು. ದುರುಳ ಪಾತ್ರಗಳ ವಿಚಾರದಲ್ಲಿ ಕಾವ್ಯನ್ಯಾಯವೇ ನ್ಯಾಯ, ಅದನ್ನಾರೂ ಪ್ರತಿಭಟಿಸುವಂತಿಲ್ಲ. ಆದರೆ ಹಲವು ಕೃತಿಗಳಲ್ಲಿ, ಅದರಲ್ಲೂ ರುದ್ರ (ಗಂಭೀರ) ನಾಟಕಗಳಲ್ಲಿ, ಸಾಧು ವ್ಯಕ್ತಿಗಳಿಗೆ ಸಂಕಟವೂ ಅಕಾಲ ಮರಣವೂ ಉಂಟಾಗುವುದರಲ್ಲಿ ಯಾವ ನ್ಯಾಯವೂ ಕಾಣದು. ಆದರೂ ಆ ಕೃತಿಗಳು ರಸಿಕ ಸಹೃದಯರ ಮೆಚ್ಚುಗೆ ಪಡೆಯುತ್ತವೆ. ಏತಕ್ಕೆಂದರೆ ಸರ್ವಾಂಗ ಸುಂದರವಾಗಿರುವುದರ ಜೊತೆಗೆ ಅವು ಓದುಗರಲ್ಲಿ ಕನಿಕರವನ್ನೂ ವಿಧಿನಿಯಮದಲ್ಲಿ ಭಯಭೀತಿಯನ್ನೂ ಕುದುರಿಸುತ್ತವೆ. ಕರುಣಾಜನಕವಾಗುತ್ತವೆ. ಆದ್ದರಿಂದ ಅದೂ ಒಂದು ವಿಧದ ಕಾವ್ಯನ್ಯಾಯವೇ ಆಗುತ್ತದೆ.

ಕಾವ್ಯ ಜೀವನದ ಪ್ರತಿಬಿಂಬ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಕವಿಗಳಲ್ಲಿ ಕೆಲವರು ಖಳನೇ ಗೆದ್ದುದನ್ನು, ಕಳ್ಳ ಪೋಲೀಸರಿಗೆ ಸಿಕ್ಕದೆ ಪಾರಾಗಿ ಸುಖವಾಗಿ ಬದುಕಿದುದನ್ನು, ಖೂನಿ ಮಾಡಿದವನೊಬ್ಬ, ನ್ಯಾಯಾಲಯದಲ್ಲಿ ವಕೀಲರ ನೆರವಿನಿಂದ ಶಿಕ್ಷೆಯಿಂದ ಪಾರಾದುದನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿರಬಹುದು. ಇಲ್ಲಿ ಕೂಡ ಕಾವ್ಯ ಉದ್ದೇಶಿಸಿರುವ ನ್ಯಾಯ ಗಮ್ಯವಾಗಿದೆ ಎಂದು ತಿಳಿಯತಕ್ಕದ್ದು.

2 ಕೆಲವು ಅರ್ವಾಚೀನರ ಮತದಂತೆ ಕಾವ್ಯನ್ಯಾಯ ಕೇವಲ ಯಾಂತ್ರಿಕ, ಕೃತಕ, ನೀರಸ; ಕೊಂಚಮಟ್ಟಿಗೆ ಹಾಸ್ಯಾಸ್ಪದ. ಒಳ್ಳೆಯವರಿಗೆ ಲಾಭ, ಕೆಡುಕರಿಗೆ ನಷ್ಟ-ಎಂದಾಗ ಕಾರ್ಯಗಳನ್ನೂ ಅವುಗಳ ಫಲಗಳನ್ನೂ ಸೇರಿನಿಂದ ಅಳೆಯಲಾಗುವುದಿಲ್ಲ ; ತಕ್ಕಡಿಯಲ್ಲಿಟ್ಟು ತೂಗಲಾಗುವುದಿಲ್ಲ. ಒಳ್ಳೆಯವರು ಪೂರ್ಣ ನಿರ್ದೋಷಿಗಳೂ ಕೆಟ್ಟವರು ಪೂರ್ಣ ಕೇಡಿಗರೂ ಆಗಲು ಸಾಧ್ಯವಿಲ್ಲ. ಯಾವ ಪಾತಕಕ್ಕೆ ಏನು ದಂಡನೆ, ಎಷ್ಟು ದಂಡ ಎನ್ನುವುದಕ್ಕೆ ಅಳತೆಗೋಲಾವುದು? ನ್ಯಾಯವೆಂಬ ಘನತತ್ತ್ವದಲ್ಲಿ ಹಲವಾರು ಸೂಕ್ಷ್ಮವೂ ಜಟಿಲವೂ ಆದ ವಿಚಾರಗಳು ಕುಳಿತಿವೆ. ತಲೆಗೆಲ್ಲ ಒಂದೇ ಮಂತ್ರ ಎಂದುಬಿಡುವ ಕಾವ್ಯನ್ಯಾಯ ನಿಜವಾದ ಅನ್ಯಾಯ ; ಆದ್ದರಿಂದ ಅದು ತಿರಸ್ಕರಣೀಯ.

3 ಇಹಲೋಕದ ಯಥಾರ್ಥ ಜೀವನದಲ್ಲಿ ನ್ಯಾಯ ನಮಗೆ ಎಂದಿಗೂ ಸಿಕ್ಕುವುದಿಲ್ಲ. ಅದನ್ನು ನೋಡಬೇಕಾದರೆ ಲೋಕೋತ್ತರವಾದ ಕಾವ್ಯಪ್ರಪಂಚಕ್ಕೆ ಹೋಗಬೇಕು. ಅಲ್ಲಿನ ಕಾರ್ಯಾವಳಿಯ ನಿಯೋಜನೆ ಆದರ್ಶ ಮಟ್ಟದಲ್ಲಿ ಏರ್ಪಾಡಾಗಿರುವುದರಿಂದ ಕಾವ್ಯನ್ಯಾಯ ವಸ್ತುಸ್ಥಿತಿಗೆ ವಿರುದ್ಧವಾದರೂ ಅಪೇಕ್ಷಣೀಯವಾದ ಆದರ್ಶ ನ್ಯಾಯವೇ ಆಗಿದೆ.

4 ನ್ಯಾಯ ಎಂಬ ಪದಕ್ಕೆ ಸಾಮಾನ್ಯ ಶಬ್ಧಕೋಶದ ಸ್ಥೂಲಾರ್ಥವನ್ನು ಕೂಡಿಸುವುದು ತಪ್ಪಾಗುತ್ತದೆ; ಅದಕ್ಕೆ ಗಾಢವಾದ ಅರ್ಥವೂ ಒಂದುಂಟು. ಉದಾರರ್ಥವನ್ನು ಅದಕ್ಕೆ ಕೊಡಬೇಕು. ಕವಿ ಸೃಷ್ಟಿಸಿರುವ ಪಾತ್ರಗಳನ್ನು ನಿಯಂತ್ರಿಸಿರುವ ಅವುಗಳ ಕಾರ್ಯಾವಳಿಯ ಸಂವಿಧಾನವನ್ನೂ ಎರಡು ಮೂರು ದೃಷ್ಟಿಗಳಿಂದ ಕೂಲಂಕಷವಾಗಿ ಪರೀಶಿಲಿಸಬೇಕು. ಹಾಗೆ ಮಾಡಿದರೆ ಉತ್ತಮ ಕವಿ ಯಾವುದೋ ಉದಾತ್ತ ನಿಯಮದಂತೆ ನ್ಯಾಯವನ್ನು ಉತ್ಕøಷ್ಟವಾಗಿ ಸಾಧಿಸಿದ್ದಾನೆಂಬುದು ವ್ಯಕ್ತವಾಗುತ್ತದೆ. ಕಷ್ಟ, ನೋವು, ಸಾವು, ಶಿಕ್ಷೆ, ರಕ್ಷೆ, ಬಹುಮಾನ-ಇತ್ಯಾದಿ ಪ್ರಾಪಂಚಿಕ ದ್ರವ್ಯಗಳನ್ನು ಮೀರಿದ, ಆದದ್ದೆಲ್ಲ ಸಮಂಜಸ, ಸಮರ್ಪಕ, ಗೆಲವು ಎಂಬ ಭಾವನೆಯನ್ನು ಮೂಡಿಸುವ, ನ್ಯಾಯ ನಮ್ಮ ಹೃದಯಕ್ಕೆ ಹೊಳೆಯುತ್ತದೆ.

5 ಲೆಕ್ಕಾಚಾರದ ಕಾವ್ಯನ್ಯಾಯವನ್ನು ಅಕಾವ್ಯನ್ಯಾಯ, ಶುಷ್ಕನ್ಯಾಯ ಎಂದು ಕೆಲವರು ಹೇಳಿದರು. ಈಚೆಗೆ ಕಾವ್ಯನ್ಯಾಯ ತತ್ತ್ವವನ್ನು ಪದ್ಯಕಾವ್ಯಗಳಿಗೆ ಹೇಗೋ ಹಾಗೆ ಗದ್ಯ ಕಾವ್ಯಗಳಿಗೂ ಅನ್ವಯಿಸುತ್ತಾರೆ. ಭವ್ಯಕಾವ್ಯ, ರೂಪಕಗಳಂತೆಯೇ ಕಾದಂಬರಿಯಲ್ಲೂ ನ್ಯಾಯ ನಮಗೆ ಗೋಚರಿಸುತ್ತದೆ. ಕಾದಂಬರಿಯೇ ಏಕೆ ಎಲ್ಲ ಬಗೆಯ ಕತೆಯಲ್ಲೂ ನ್ಯಾಯವೇ ಚಾಲಕ ಶಕ್ತಿ. ಎಂದರೆ, ಆರಿಸಿಕೊಂಡ ಕಥಾವಿಷಯವನ್ನು ಮನವೊಪ್ಪುವಂತೆ ಸಾಹಿತಿ ನಿರೂಪಿಸಿದ್ದಾನೆ ಎಂಬುದು ಇಲ್ಲಿ ನ್ಯಾಯಸಾಧನೆಯ ಅರ್ಥ.

 

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ